ಇಕ್ತಿಯೊಪ್ಟೆರಿಜಿಯ-
ಮೀಸೊಜೋಯಿಕ್ ಯುಗದಲ್ಲಿ (65-225 ದಶಲಕ್ಷ ವರ್ಷ ಪ್ರಾಚೀನ ಕಾಲದಲ್ಲಿ) ಇದ್ದ ಗತವಂಶೀ ಸರೀಸೃಪಗಳ ಒಂದು ಉಪವರ್ಗ (ಸಬ್‍ಕ್ಲಾಸ್). ಈ ಉಪವರ್ಗದ ಪ್ರಾಣಿಗಳು ನೀರಿನಲ್ಲಿ ವಾಸಿಸುತ್ತಿದ್ದುವು. ದೊರೆತಿರುವ ಪಳೆಯುಳಿಕೆಗಳ ಸಹಾಯದಿಂದ ಅವನ್ನು ಅಭ್ಯಸಿಸಲಾಗಿದೆ. ಇದರಲ್ಲಿ ಎರಡು ಗುಂಪುಗಳಿವೆ (ಆರ್ಡರ್ಸ್) : 1. ಮೀಸೊಸಾರಿಯ. 2. ಇಕ್ತಿಯೋಸಾರಿಯ.

ಮೀಸೊಸಾರಿಯ : ಸರೀಸೃಪಗಳ ಗುಂಪಿನಲ್ಲಿ ಇವುಗಳ ಸ್ಥಾನ ಎಲ್ಲಿ ಏನು ಎಂದು ಖಚಿತವಾಗಿ ಇನ್ನೂ ಹೇಳಲಾಗುವುದಿಲ್ಲ. ಇವು ಕಾರ್ಬಾನಿಫೆರಸ್ ಕಾಲದ ಉತ್ತರಾರ್ಧದಲ್ಲಿ (280 ದಶಲಕ್ಷ ವರ್ಷಗಳ ಹಿಂದೆ) ಅಥವಾ ಪರ್ಮಿಯನ್ ಕಾಲದ ಆದಿಯಲ್ಲಿದ್ದುವು ಎಂಬುದಕ್ಕೆ ಪಳೆಯುಳಿಕೆಗಳ ದಾಖಲೆ ಇದೆ. ಇವು ಸಿಹಿನೀರಿನ ಸರೋವರ ವಾಸಿಗಳು. ದೇಹ ತೆಳ್ಳಗಿದ್ದು ಸುಮಾರು 3 ಉದ್ದವಾಗಿತ್ತು. ಹಿಂದಿನ ಕಾಲುಗಳು ಪ್ರಬಲವಾಗಿದ್ದುವು. ಪಕ್ಕೆಗಳು ತೀರ ಉದ್ದವಾಗಿದ್ದುದರಿಂದ ಬಾಲ ಮೊಟಕಾಗಿತ್ತು. 

ಇಕ್ತಿಯೋಸಾರಿಯ : ಟ್ರಯಾಸಿಕ್ ಕಾಲದಲ್ಲಿ ಕಾಣಿಸಿಕೊಂಡು ಜುರಾಸಿಕ್ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿದ್ದು (ಎಂದರೆ 225-175 ದಶಲಕ್ಷ ವರ್ಷಗಳ ಹಿಂದಿನ ಕಾಲ) ಕ್ರಿಟೇಷಿಯಸ್ ಕಾಲದ ಉತ್ತರಾರ್ಧದಲ್ಲಿ (65 ದಶಲಕ್ಷ ವರ್ಷಗಳ ಹಿಂದೆ) ಕಾಣೆಯಾದುವು. ಇವು ಮೀನಿನಂತಿರುವ ಸಮುದ್ರ ಸರೀಸೃಪಗಳು. ಇವುಗಳ ತಲೆಬುರುಡೆಯ ನೆತ್ತಿ ಪ್ರದೇಶದ ಪಕ್ಕಗಳಲ್ಲಿ ಒಂದೊಂದು ಶೂನ್ಯ ಪ್ರದೇಶವಿತ್ತು. ಈ ಪ್ರಾಣಿಗಳು ಸುಮಾರು 30-40 ಉದ್ದವಾಗಿದ್ದುವು. ತಲೆ ದಪ್ಪ, ಮುಸುಡಿ ಉದ್ದವಾಗಿ ಕೊಕ್ಕಿನ ರೀತಿಯಲ್ಲಿತ್ತು. ತಲೆ ಮತ್ತು ಮುಂಡಗಳ ನಡುವೆ ಕತ್ತು ಇರಲಿಲ್ಲ. ಇವುಗಳಿಗೆ ಉದ್ದವಾದ ಬಾಲವೂ ಮೇಲುರೆಕ್ಕೆಯೂ ಇದ್ದುವು. ಕೈಕಾಲುಗಳು ಹುಟ್ಟುಗಳ ರೀತಿ. ಹಲ್ಲುಗಳು ಚೂಪು. ಕಣ್ಣುಗಳಲ್ಲಿ ಸ್ಕ್ಲೀರಾಟಿಕ್ ಫಲಕಗಳಿದ್ದುವು. ಇವು ಮೀನಿನಂತಿದ್ದುದರಿಂದ ದಡಕ್ಕೆ ಬಂದು ಮೊಟ್ಟೆಗಳನ್ನಿಡಲು ಆಗುತ್ತಿರಲಿಲ್ಲವೆಂದು ತೋರುತ್ತದೆ. ಭ್ರೂಣಗಳ ದೇಹದಲ್ಲಿ ಪಕ್ಕೆಲುಬುಗಳ ಮಧ್ಯೆ ಇದ್ದುದು ಪಳೆಯುಳಿಕೆಯಿಂದ ಗೊತ್ತಾಗಿದ್ದರೂ ಅವು ಮರಿಗಳನ್ನು ಹಾಕುತ್ತಿದ್ದುವೆಂಬುದಕ್ಕೆ ಖಚಿತವಾದ ಆಧಾರಗಳಿಲ್ಲ. ಈ ಪ್ರಾಣಿಗಳ ಪಿತೃಶ್ರೇಣಿಯ ಪ್ರಾಣಿಗಳು ಯಾವುವೆಂಬುದು ಖಚಿತವಾಗಿಲ್ಲ. (ನೋಡಿ- ಇಕ್ತಿಯೋಸಾರ್)
(ಎನ್.ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ